ಸೋಲಂಕಿ ವಂಶ
	ಗುಜರಾತಿನಲ್ಲಿ ಆಳಿದ ಪ್ರಸಿದ್ಧ ರಾಜ ಮನೆತನ. ಇವರನ್ನು ಗುಜರಾತಿನ ಚಾಳುಕ್ಯರೆಂದು ಕರೆಯುತ್ತಾರೆ. ಗೂರ್ಜರ ಪ್ರತೀಹಾರರ (8-9ನೆಯ ಶತಮಾನ) ಅನಂತರ ಇವರು ಗುಜರಾತಿನಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದರು. ಇವರ ಆಳಿಕೆಯಲ್ಲಿ ಗುಜರಾತಿನ ಗಡಿಗಳು ಬಹುದೂರದವರೆಗೆ ವಿಸ್ತರಿಸಿದುವು. ಸರಸ್ವತಿ ನದಿತೀರದ ಮೇಲಿದ್ದ ಅನಿಲವಾಡದಿಂದ ಇವರು ಮೂರು ಶತಮಾನಗಳ ಕಾಲ ಆಳಿಕೆ ನಡೆಸಿದರು.

	ಮೂಲರಾಜ (961-96) ಈ ಮನೆತನದ ಸ್ಥಾಪಕ. ಸಾಹಸಿಯೂ ಪರಕ್ರಮಿಯೂ ಆಗಿದ್ದ ಈತ ಚಾಹಮಾನ, ಪರಮಾರ, ಕಲ್ಯಾಣಿಯ ಚಾಳುಕ್ಯ ಹಾಗೂ ಸಿಂಧ್ ದೊರೆಗಳೊಡನೆ ಹೋರಾಡಿ ರಾಜ್ಯವನ್ನು ವಿಸ್ತರಿಸಿದ. ಇವನ ಅನಂತರ ಚಾಮುಂಡ ಮತ್ತು ದುರ್ಲಭರಾಜರು ಆಳಿಕೆ ನಡೆಸಿದರು. ಒಂದನೆಯ ಭೀಮನ ಆಳಿಕೆಯಲ್ಲಿ (1022-64) ಘಜ್ನಿಮಹಮ್ಮದ್ ಗುಜರಾತಿನ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿದ. ಪರಮಾರರು ಹಾಗೂ ಕಳಚೂರಿ ದೊರೆ ಕರ್ಣನನ್ನು ಭೀಮ ಸೋಲಿಸಿದ.

	ಅನಂತರ ಆಳಿದ ಜಯಸಿಂಹ (1094-1144) ಈ ಸಂತತಿಯ ಪ್ರಸಿದ್ಧ ದೊರೆ. ಇವನು ಶಾಕಾಂಬರಿಯ ಚೌಹಾಣರು, ಮಾಳವದ ಪರಮಾರರು ಮತ್ತು ಬುಂದೇಲ್ ಖಂಡದ ಚಂದೇಲರನ್ನು ಸೋಲಿಸಿ ರಾಜ್ಯ ವಿಸ್ತರಿಸಿದ. ಇವನ ರಾಜ್ಯ ಜೋಧಪುರದ ಬಾಲಿಯವರೆಗೆ ಮತ್ತು ಜೈಪುರದ ಸಾಂಬಾದ್‍ವರೆಗೂ ಪೂರ್ವದಲ್ಲಿ ಭೀಲ್ಯ ಮತ್ತು ಪಶ್ಚಿಮದಲ್ಲಿ ಕಾಥೇವಾರ್ ಮತ್ತು ಕಚ್‍ವರೆಗೂ ವಿಸ್ತರಿಸಿತ್ತು. ಇವನಿಗೆ ಸಿದ್ಧರಾಜ ಎಂಬ ಬಿರುದಿತ್ತು. ಪ್ರಸಿದ್ಧ ಕವಿ ಹೇಮಚಂದ್ರ ಜಯಸಿಂಹನ ಆಸ್ಥಾನದಲ್ಲಿದ್ದ.

	ಜಯಸಿಂಹನ ಅನಂತರ ಬಂದ ಕುಮಾರಪಾಲ (1144-73) ಈ ಸಂತತಿಯ ಮತ್ತೊಬ್ಬ ಪ್ರಸಿದ್ಧ ದೊರೆ. ಈತ ಕೊಂಕಣದ ಮೇಲೆ ದಂಡಯಾತ್ರೆ ನಡೆಸಿ ತನ್ನ ರಾಜ್ಯವನ್ನು ವಿಸ್ತರಿಸಿದ. ತನ್ನ ರಾಜ್ಯದ ಮೇಲೆ ಆಕ್ರಮಣವೆಸಗಿದ ಚೌಹಾಣರ ಆಕ್ಣೊರಾಜ, ಪರಮಾರರ ವಿಕ್ರಮಸಿಂಹನನ್ನೂ ಮಾಳ್ವದ ಬಲ್ಲಾಳನನ್ನೂ ಇವನು ಸೋಲಿಸಿದ. ಹೇಮಚಂದ್ರಮುನಿ ಪ್ರಭಾವಕ್ಕೆ ಒಳಗಾಗಿ ಜೈನಧರ್ಮವನ್ನು ಸ್ವೀಕರಿಸಿದ.

	ಇವನ ಅನಂತರ ಪ್ರತಾಪಮಲ್ಲ ಮತ್ತು ಅಜಯಪಾಲರ ನಡುವೆ ರಾಜ್ಯಕ್ಕಾಗಿ ಕಲಹಗಳು ನಡೆದುವು. ಅಜಯಪಾಲ ಜಯಗಳಿಸಿ ಸಿಂಹಾಸನವೇರಿದ. ಇವನ ಅನಂತರ ಸೋಲಂಕಿ ರಾಜವಂಶ ಕ್ಷೀಣಿಸಲಾರಂಭಿಸಿತು. 1197ರಲ್ಲಿ ದೆಹಲಿಯ ಕುತ್ಬುದ್ದೀನ್ ಐಬಕ್ ಅನಿಲವಾಡವನ್ನು ಕೊಳ್ಳೆ ಹೊಡೆದ. ಚಾಳುಕ್ಯರ ಮಂತ್ರಿಯಾಗಿದ್ದ ಲವಣ ಪ್ರಸಾದ ಹದಿಮೂರನೆಯ ಶತಮಾನದಲ್ಲಿ ವಾಘೇಲ ಸಂತತಿಯನ್ನು ಸ್ಥಾಪಿಸಿದ. ಕರ್ಣದೇವವಾಘೇಲ ಈ ಸಂತತಿಯ ಸಮರ್ಥ ದೊರೆ. ಅಲಾವುದ್ದೀನ್ ಖಲ್ಜಿ ಹದಿಮೂರನೆಯ ಶತಮಾನದಲ್ಲಿ ಈ ಸಂತತಿಯ ಆಳಿಕೆಯನ್ನು ಕೊನೆಗಾಣಿಸಿದ. ಸೋಲಂಕಿ ವಂಶದ ದೊರೆಗಳು ಪ್ರಜಾನುರಾಗಿಗಳಾಗಿದ್ದು ಕಲೆ, ಸಾಹಿತ್ಯ, ವಾಸ್ತಶಿಲ್ಪಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ.				
				(ಎಸ್.ಎಮ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ